Thursday 11 December 2008

ಒಂದು ದಿನಚರಿ



ಕಣ್ಣು ತೆರೆಯಲೇ ಭಯ
ಹೆದರಿ ಮಂಜುಗತ್ತಲೆಗಲ್ಲ
ಬೆಳಕಿಗೆ ಕೊಡಬೇಕಾದ
ಉತ್ತರದಿಂದ

ನೆತ್ತಿ ಸೆರಗು ಜಾರದಂತೆ
ಮನೆಯ ಹೊಸ್ತಿಲಿನೊಂದಿಗೆ
ಹೃದಯಕ್ಕೂ ಮೊಳೆ
ಬಡಿಸಿಕೊಂಡ ದಿನದಿಂದ
ಗಂಡನ ಹೆಸರೇಳಿ
ತನ್ನನ್ನೇ ಮರೆತ ಮರೆವು

ಕುಳಿ ಬಿದ್ದ ಕಣ್ಣಿಗೆ
ಮರೀಚಿಕೆಯಾದ ಕನಸುಗಳು
ಬೆಳದಿಂಗಳ ಬಯಕೆಗಳ
ಸುಟ್ಟ ಕಾಮಕೇಳಿಯ ರಾತ್ರಿಗಳು
ಸಾಂತ್ವಾನ ಹೇಳಲರಿಯದ ಮುೂಲೆಗೆ
ಅರ್ಥವಾಗದ ನಿವೇದನೆ
ಚುಕ್ಕಿಗಳ ನೋಡಿ ನೋಟ
ಮರೆತಾಳೆಂದರೂ
ಮುಗಿಲ ಮರೆಮಾಚಿದ ಮಾಳಿಗೆ
ಯಾತನೆಯ ಮೌನದ ಪುಟಕ್ಕೆ
ಸ್ವಚ್ಛಂದ ಬಯಸಿ ಗೆಳತಿ
ಬರೆದಿಟ್ಟ ದಿನಚರಿ

ಧರಿಸಿದ್ದೆಲ್ಲವ ಕಳಚಿ
ಹಂಡೆ ಕಟ್ಟೆಗಿಟ್ಟು
ಬೆನ್ನ ಮೇಲೆ ನಿರಾಳ
ಹೆರಳ ರಾಶಿ ಚೆಲ್ಲಿ
ಹಾಯೆನಿಸುವ
ಬಿಸಿನೀರಿನ ಆವಿಯೊಂದಿಗೆ
ತನ್ನ ಬಿಡುಗಡೆ
ಇಡೀ ಜಗತ್ತು
ಬಚ್ಚಲು ಮನೆಯಾದಂದು!

ಟಿ.ಎಂ. ಉಷಾರಾಣಿ, ಹೂವಿನಹಡಗಲಿ

Sunday, December 7, 2008

ನಿಮ್ಮಲ್ಲೊಂದು ಸಣ್ಣ ಪ್ರಾರ್ಥನೆ




1
ಅಂದುಕೊಂಡಂತೆ ಎಲ್ಲವೂ ನಡೆದಿದ್ದರೆ
ಅವಳು ನಿನ್ನ ಹಸೆಮಣೆಯ ನಿರ್ಜೀವ ದೇಹವಾಗುತ್ತಿರಲಿಲ್ಲ
ಅವಳ ಮನೆ ಗೋಡೆ ಮೇಲಿನ ಹಲ್ಲಿಯ ಕಣ್ಣುಗಳ
ದಿಟ್ಟಿಸಿ ನೋಡಿ ದಿಕ್ಕೆಡಬೇಡಿ, ಅಲ್ಲಿ ನಮ್ಮ ಪ್ರೇಮದ ಚಿತ್ರಗಳು ಬಿಕ್ಕಳಿಸುತ್ತಿವೆ.
ಆ ಹಲ್ಲಿಯ ಲೊಚಗುಟ್ಟುವಿಕೆಯ ಭಾಷೆ ನಿಮಗೆ ತಿಳಿಯದಿದ್ದದ್ದೇ ಒಳ್ಳೆಯದು
ಅದು ಸಾವಿರ ಬಾರಿ ಆರ್ತವಾಗಿ ನಿಮ್ಮಲ್ಲಿ ಮೊರೆಯಿಟ್ಟಿರುತ್ತದೆ
ಅವಳ ಹಿಡಿಯಾಗಿ ಹಿಂಡಿದರೆ ನಿನ್ನ ನೆನಪಿನ ಒಂದು ಕಣ ಹೊರಬಿದ್ದರೂ
ನಾನು ನೇಣಿಗೆ ತಲೆಕೊಟ್ಟು ನಿಶ್ಚಿಂತೆಯಿಂದ ಪ್ರಾಣಬಿಡುವೆ ಎಂದು

2
ತಮ್ಮ ಯೌವ್ವನವ ತಣ್ಣಗೆ ದಹಿಸಿ ಮುಪ್ಪಾದ
ಸ್ವರ್ಗದ ಎಷ್ಟೊಂದು ಕೋಣೆಯ ಬಾಗಿಲುಗಳನ್ನು ನಾವಿಬ್ಬರೂ ತೆರೆದು
ಸುಖದ ಬತ್ತಿ ಹಚ್ಚಿ ಕೋಣೆಗೆ ಯೌವ್ವನದ ಕಿಚ್ಚ ಹಚ್ಚಬೇಕೆಂದಿದ್ದೆವು
ನಿಮ್ಮಲೊಂದು ಸಣ್ಣ ಪ್ರಾರ್ಥನೆ
ಪುರುಷತ್ವದ ಸೋಗಲಾಡಿತನದ ಚಿತ್ರಗಳ
ಅವಳ ಮನದ ಕೋಣೆ ತುಂಬ ಅಂಟಿಸಿ
ಮುಊರು ಕಾಸಿನ ಸಿನಿಮಾ ಹೀರೋನಂತೆ ಪೋಜು ಕೊಡಬೇಡಿ

3
ಗಂಡ ಹೆಂಡಿರೆಂಬ ಚಿತ್ರವ ದಗದಗನೆ ಉರಿಸಿ ಚಳಿ ಕಾಯಿಸಿಕೊಂಡು
ನಾವಿಬ್ಬರೂ ಅದರ ಬೂದಿ ಇರದಂತೆ ಕೊಡವಿ
ಒಬ್ಬರೊಳಗೊಬ್ಬರು ಕಳೆದು ಹೋಗಿ
ಕಳೆದದ್ದ ಇನ್ನೆಂದೂ ಹುಡುಕದಂತೆ ಬದುಕಬೇಕೆಂದಿದ್ದೆವು
ನಿಮ್ಮಲ್ಲೊಂದು ಸಣ್ಣ ಪ್ರಾರ್ಥನೆ
ಹೂವಿನಂತವಳ ಜತೆ ನೀವು ಕಬ್ಬಿಣವಾಗುವ ಕನಸೂ
ನಿಮ್ಮ ಮನೆ ಪ್ರವೇಶಿಸದಂತೆ ಬಾಗಿಲುಗಳಿಗೆ ತಾಕೀತು ಮಾಡಿರಿ
ಇರುವೆ ಕಾಲು ಮುರಿದರೂ ಶ್ರುಶೂಷೆ ಮಾಡಿ
ದಿನಗಟ್ಟಲೆ ದು:ಖಿಸುವ ಅವಳ ಮನದ ಮೇಲೆ
ನೀವು ಒರಟೊರಟಾಗಿ ನಡೆದು ಬಿಡಬೇಡಿ

4
ನಾವಿಬ್ಬರೂ ಜಗದ ಕ್ರೌರ್ಯಕ್ಕೆ ತಾಯ್ತನವ ತೊಟ್ಟುತೊಟ್ಟು ಕುಡಿಸಿ
ಅದರ ಉರಿಗಣ್ಣ ತಣ್ಣಗಾಗಿಸಿ ಮನುಷ್ಯ ಸಹಜ ಕ್ಲೀಷೆಗಳ ದಹಿಸಿ
ಜಗದ ನಿಚ್ಚಳ ಬದುಕ ಕಣ್ತುಂಬಿಕೊಳ್ಳಬೇಕೆಂಬ ಕನಸು ಕಂಡಿದ್ದೆವು
ನಿಮ್ಮಲ್ಲೊಂದು ಸಣ್ಣ ಪ್ರಾರ್ಥನೆ
ಅವಳ ತಾಯ್ತನದ ಬೆಚ್ಚಗಿನ ಗೂಡು ಕಿತ್ತು
ಧರ್ಮದ ಗೋಡೆಕಟ್ಟಿ ಅದಕ್ಕೆ ಮೊಳೆ ಹೊಡೆದು
ನಿಮ್ಮಿಬ್ಬರ ಫೋಟೋ ತೂಗುಹಾಕಿ ಜಗದೆದುರು ಹರಾಜಿಗಿಡಬೇಡಿ.

(ಅರುಣ್ ಜೋಳದಕೂಡ್ಲಿಗಿ ನಮ್ಮ ನಡುವಿನ ತರುಣ(!) ಕವಿ. ಹಂಪಿ ಕನ್ನಡ ವಿವಿಯಲ್ಲಿ ಸಂಶೋಧನಾ ವಿದ್ಯಾರ್ಥಿ. ಹಂಪಿಯ ಸ್ಮಾರಕ, ದಿಬ್ಬ ಹಾಗೂ ಹಿಮಾಲಯದಲ್ಲಿ ಆಗಾಗ ಕಳೆದು ಹೋಗುವುದು ಇವನ ಹವ್ಯಾಸ. ಇವನ ಇತ್ತೀಚಿನ ಕವನ ಇಲ್ಲಿದೆ. ಓದಿ ಪ್ರತಿಕ್ರಿಯಿಸಿ. ಕವಿತೆ ಹಿಡಿಸಿದರೆ, ಬ್ಲಾಗ್ ನ್ನು ಹೊಗಳಿ, ಹಿಡಿಸದಿದ್ದರೆ ಯಾವುದೇ ಮುಲಾಜಿಲ್ಲದೆ ಕವಿಯನ್ನು ಟೀಕಿಸಿ...)

ಹಿಂಗುವುದೇ ತನು ಸೂತಕ ಹಿಂಗಲಾರದೇ ಮನ ಸೂತಕ?

(ಪ್ರಜಾವಾಣಿಯಲ್ಲಿ ಪ್ರಕಟವಾದ ಪ್ರೊ.ಬಿ.ಎ.ವಿವೇಕ್ ರೈರವರ ಲೇಖನದ ಆಯ್ದ ಭಾಗ)
ಧರ್ಮವೊಂದು ಗನ್ನಿನಿಂದ ಕೊಲ್ಲುವ ಮೂಲಕ, ರಕ್ತ ಹರಿಸುವ ಮೂಲಕ ತನ್ನ ಕ್ರೂರ ಪ್ರದರ್ಶನ ಮಾಡುವಲ್ಲಿ ಹಣದ ಬಲ ಖಂಡಿತವಾಗಿಯೂ ಪ್ರಧಾನವಾಗಿದೆ. ಪಂಚತಾರಾ ಹೋಟೆಲ್ ಮತ್ತು ಎಕೆ 47 ಇವೆರೆಡೂ ಹಣದ ಕೊಬ್ಬಿನ ಎರಡು ರೂಪಕಗಳು. ಒಂದು ಭೋಗ, ಇನ್ನೊಂದು ಹಿಂಸೆ. ಭದ್ರತೆ, ಹುನ್ನಾರ, ತಂತ್ರಗಾರಿಕೆ-ಇವೆಲ್ಲಾ ರಾಜಕೀಯ ವ್ಯವಸ್ಥೆಯನ್ನು ಬಲಪಡಿಸಬಹುದು: ಆದರೆ ಜನಸಾಮಾನ್ಯರ ಪಾಲಿಗೆ ಇವು ಭಯ ಮತ್ತು ಆತಂಕದ ಕರಾಳ ಸ್ವಪ್ನಗಳು...
ಯಾವುದೇ ವ್ಯಕ್ತಿ ಸ್ವಭಾವತ: ಮತಾಂಧ ಆಗಿರುವುದಿಲ್ಲ. ಆದರೆ ಒಂದು ಮತದ ಒಳಗಡೆ ತನ್ನನ್ನು ಗುರುತಿಸಿಕೊಳ್ಳುವುದು ಅನಿವಾರ್ಯ ಎಂಬ ಕೃತಕ ವಾತಾವರಣ ನಿಮರ್ಾಣವಾಗಿರುವುದು ರಾಜಕೀಯದಲ್ಲಿ ನಿಶೇಧಾತ್ಮಕ ರೂಪದಲ್ಲಿ. ಆದ್ದರಿಂದಲೇ ಇದು ಸಂಘರ್ಷವನ್ನೇ ತನ್ನ ಉದ್ದೇಶವನ್ನಾಗಿ ಇಟ್ಟುಕೊಂಡಿರುತ್ತದೆ. ರಾಜಕೀಯ ಮತ್ತು ಧಾಮರ್ಿಕ ಚಳುವಳಿಗಳು ಆಧುನಿಕ ಸಮಾಜಗಳ ಹೊಸ ಅಗತ್ಯಗಳಿಗೆ ಬೇಕಾದ ಅನನ್ಯತೆಗಳನ್ನು ರೂಪಿಸಲು ಅಶಕ್ತವಾದಾಗ ಮೂಲಭೂತವಾದದ ಪ್ರವೃತ್ತಿಯನ್ನು ಹೆಚ್ಚು ಪ್ರೋತ್ಸಾಹಿಸುತ್ತವೆ. ಮೂಲ ಪರಂಪರೆಗೆ ಹಿಂದಿರುಗಲು ಒತ್ತಾಸೆ ನೀಡುವ ಇವು ಮೂಲ ಪರಂಪರೆ ಬಗ್ಗೆ ತಮ್ಮದೇ ಆದ ಸೀಮಿತ ಹಾಗೂ ತಪ್ಪು ಕಲ್ಪನೆಗಳನ್ನು ಹೊಂದಿರುತ್ತವೆ. ಜಾಗತಿಕ ಮಟ್ಟದಲ್ಲಿ ಹೆಚ್ಚುತ್ತಿರುವ ಮತೀಯ ಮೂಲಭೂತವಾದ ಈ ಸ್ವರೂಪದ್ದು. ಇಲ್ಲೆಲ್ಲಾ ಮತಧರ್ಮ ಎನ್ನುವುದು ವ್ಯವಾಹಾರಿಕ ಉದ್ದೇಶಕ್ಕಾಗಿ ಬಳಕೆಯಾಗುವ ರಾಜಕೀಯ ಸಾಧನವೇ ಹೊರತು, ಅದೇ ನಿಜವಾದ ಅನನ್ಯತೆಯಾಗಿ ಉಳಿದಿಲ್ಲ.
ಜಾಗತೀಕವಾಗಿ ಬಲಿಷ್ಠ ರಾಷ್ಟ್ರಗಳು, ದುರ್ಬಲ ರಾಷ್ಟ್ರಗಳು ತಮ್ಮ ಶಕ್ತಿಯ ವಿಸ್ತರಣೆಗಾಗಿ ಮತ್ತು ದೌರ್ಬಲ್ಯವನ್ನು ಮುಚ್ಚಿಕೊಳ್ಳುವುದಕ್ಕಾಗಿ ಬಾಹ್ಯ ಯುದ್ಧ ಮತ್ತು ಗುಪ್ತ ಯುದ್ಧಗಳಿಗೆ ಬೆಂಬಲವನ್ನು ಕೊಡುತ್ತವೆ. ಅಮೇರಿಕ ಮತ್ತು ಚೀನಾದಂತಹ ರಾಷ್ಟ್ರಗಳು ಜಾಗತಿಕ ಪ್ರಭುತ್ವದ ರ್ಯಾಂಕಿಗಾಗಿ ಅನ್ಯ ದೇಶಗಳ ನಡುವಿನ ವೈಮನಸ್ಸನ್ನು, ಆಂತರಿಕ ದೌರ್ಬಲ್ಯಗಳನ್ನು ಒಂದು ಲಾಭವನ್ನಾಗಿ ಮಾಡಿಕೊಂಡು ಯುದ್ಧ ಮತ್ತು ಶಾಂತಿಯ ಮಂತ್ರಗಳನ್ನು ಒಟ್ಟಿಗೆ ಜಪಿಸುತ್ತವೆ. ಘಾಸಿ ಮಾಡುವ ಮತ್ತು ಆರೈಕೆ ಮಾಡುವ ಎರಡೂ ಕೆಲಸಗಳನ್ನು ಒಟ್ಟಿಗೇ ಮಾಡುವ ಕಾರ್ಯತಂತ್ರ ರಾಷ್ಟ್ರೀಯತೆಗೆ ಬಲಿಷ್ಠತೆಯನ್ನು ತಂದುಕೊಡುವ ಒಂದು ಮುಖ್ಯವಾದ ಮಾರ್ಗ. ಆಥರ್ಿಕವಾಗಿ ದುರ್ಬಲವಾಗಿರುವ, ಆದರೆ ಹೊರ ಜಗತ್ತಿಗೆ ಆಧುನಿಕ ಸೌಕರ್ಯಗಳ ಸಂಪತ್ತುಗಳ ಪ್ರದಶರ್ಿಸುವ ದೇಶಗಳು ತಮ್ಮ ಆಡಳಿತದ ದೌರ್ಬಲ್ಯಗಳನ್ನು ಮುಚ್ಚಿಕೊಳ್ಳಲು ಆಕ್ರಮಣಶೀಲತೆಯನ್ನು ಪ್ರಚೋದಿಸುವ ಕೆಲಸಗಳನ್ನು ನಿರಂತರವಾಗಿ ಮಾಡುತ್ತಲಿದೆ. ಪ್ರಜೆಗಳನ್ನು ಕಾಯಲು ಸಾಧ್ಯವಾಗದವರು ಅನ್ಯರ ಮೇಲೆ ಆಕ್ರಮಣ ಮಾಡಲು ಅಭಿಪ್ರಾಯ ನಿಮರ್ಾಣದ ಕಾಖರ್ಾನೆಗಳನ್ನು ತೆರೆದು ದ್ವೇಷದ ಉತ್ಪನ್ನಗಳನ್ನು ಉತ್ಪಾದಿಸಿ, ಜನರನ್ನು ನಿರಂತರ ಭಯೋತ್ಪಾದನೆಯ ಯುದ್ಧದ ಸರ್ಪದ ಹೆಡೆ ನೆರಳಲ್ಲಿ ಬದುಕಬೇಕಾದ ಅನಿವಾರ್ಯತೆಗೆ ತಂದೊಡ್ಡುತ್ತಾರೆ.
ಪಾಕಿಸ್ತಾನ, ಬಾಂಗ್ಲದೇಶದಂತಹ ದೇಶಗಳು ದ್ವೇಷದ ಕಾಖರ್ಾನೆಗಳಲ್ಲಿ ಮತಧರ್ಮದ ಸರಕುಗಳನ್ನು ನಿಮರ್ಿಸುತ್ತಿರುವ ಕ್ರಮ ಈ ಬಗೆಯದ್ದು. ಇದು ಖಂಡಿತ ಅಲ್ಲಿನ ಜನಗಳ ನಿಜವಾದ ನಿಜವಾದ ನೆಲೆಯ ಭಾವನೆಗಳಲ್ಲ. ಇಂತಹ ಸ್ಥಿತಿಯಲ್ಲಿ ಭಾರತ ಯಾವುದನ್ನು ತನ್ನ ಆದರ್ಶವನ್ನಾಗಿ ಇಟ್ಟುಕೊಳ್ಳಬೇಕೆನ್ನುವುದು ನಮ್ಮ ಅನನ್ಯತೆಯ ಮುಖ್ಯ ಪ್ರಶ್ನೆ. ಬಲಿಷ್ಠ ರಾಷ್ಟ್ರಗಳ ಕೊಲ್ಲುವ-ಕಾಯುವ ಮಾದರಿಯನ್ನೇ? ಆಥರ್ಿಕವಾಗಿ ನೈತಿಕವಾಗಿ ಜರ್ಜರಿತವಾಗಿರುವ ರಾಷ್ಟ್ರಗಳಿಗೆ ಪ್ರತಿರೋಧವಾಗಿ ಅವುಗಳದ್ದೇ ಮಾದರಿಯನ್ನೇ? ಈ ಎರಡಕ್ಕಿಂತಲು ಭಿನ್ನವಾಗಿ ಭಾರತದ ಪರಂಪರೆಯ ಶಕ್ತಿ, ಧೈರ್ಯ, ಛಲ, ಸೃಜನಶೀಲತೆ, ಬಹುರೂಪಿ ಬದುಕಿನ ಸಾಧ್ಯತೆ, ಕಾಯಕದ ಬಗೆಗಿನ ಅಪಾರವಾದ ನಂಬಕೆ ಮತ್ತು ಇಂತಹ ನೂರಾರು ಶಕ್ತಿಗಳನ್ನು ಕ್ರೂಢೀಕರಿಸಿದ ಬಲಿಷ್ಠ ಬಹುರೂಪಿ ಶಕ್ತಿಯೊಂದರ ನಿಮರ್ಾಣದ ಮೂಲಕ ಜಾಗತಿಕವಾಗಿ ಹೊಸ ಮಾದರಿಯೊಂದನ್ನು ಕಟ್ಟಲು ಸಾಧ್ಯವೇ?.....

Sunday, November 23, 2008

ಇಲ್ಲ, ನನಗೆ ರಾಷ್ಟ್ರವಿಲ್ಲ...

ಇಲ್ಲ
ನನಗೆ ನಿಷ್ಠೆ ಇಲ್ಲ ಈ ಗಡಿಗಳ ಮೇಲೆ
ಖಂಡಿತ ನಾನು ಬದ್ಧನಲ್ಲ
ಹುಸಿ ರಾಷ್ಟ್ರೀಯತೆಯ ಮತೀಯ ವ್ಯಾಖ್ಯಾನಕ್ಕೆ
ಆಳುವುದಕ್ಕಾಗಿಯೆ ಕಟ್ಟಿಕೊಂಡ ರಾಷ್ಟ್ರಕ್ಕೆ
ಪ್ರಜೆಗಳ ಹೆಸರಿನ ಪ್ರಭುತ್ವದ ಗಣಿತಕ್ಕೆ
ನಿಷ್ಠೆಯಿಲ್ಲ ನನಗೆ ಖಂಡಿತ. ಬದ್ಧನಲ್ಲ ನಾನು
ಶಬ್ದಗಳನ್ನೆ ಶಸ್ತ್ರವನ್ನಾಗಿಸಿ
ಕೊಂಡವರುದ್ರೋಹಿ ಎಂದರೂ ನನಗೆ ಅಳುಕಿಲ್ಲ
ಇಲ್ಲ, ನನಗೆ ರಾಷ್ಟ್ರವಿಲ್ಲ, ಭಾಷೆಯಿಲ್ಲ
ತಥಾಕಥಿತ ಧರ್ಮವಿಲ್ಲ

ಈ ನೆಲವೇ ನನ್ನ ಸೃಷ್ಟಿಯ ಮೂಲ
ಈ ನೆಲವೇ ನನ್ನ ಅನ್ನದ ಮೂಲ
ಈ ನೆಲಕ್ಕೇ ನನ್ನ ಬದುಕು ಅರ್ಪಿತ
ಈ ನೆಲಕ್ಕೇ ನನ್ನ ಸಾವೂ ಬದ್ಧ
ಈ ಅಖಂಡ ನೆಲವೇ ನನ್ನ ತಾಯಿ
ಈ ಅಖಂಡ ನೆಲವೇ ನನ್ನ ಮಾತೃಭೂಮಿ

ನನ್ನ ತಾಯಿ ಶುಭ್ರಜೋತ್ಸಾನ ಪುಲಕಿತ ಯಾಮಿನಿ ಅಲ್ಲ
ಸದಾವತ್ಸಲೇ…ಎಂದು ನಮಿಸುವ ನಟನೆ ನನಗೆ ಬೇಕಿಲ್ಲ
ನನ್ನ ನಾಡಿನ ಪರ್ವತಗಳನ್ನು
ತಾಯಿ ಮೊಲೆಗಳಿಗೆ ಹೋಲಿಸುವ
ತಾಯ್ಗಂಡ ಭಕ್ತಿ ಬೇಡ ನನಗೆ
ಹೌದು, ನಾನು ಈ ನೆಲದ ಜೀವ
ಅಖಂಡ ನೆಲವೇ ನನ್ನ ಮಾತೃಭೂಮಿ
ಸೀತೆ ನನ್ನಕ್ಕ, ಬಸವ ನನ್ನಣ್ಣ
ಶಂಭೂಕ ನನ್ನ ಬಂಧು
ಬುದ್ಧ ಮಾರ್ಗದರ್ಶಕ ದತ್ತ ನನ್ನ ಮಿತ್ರ
ತುತ್ತಿನ ತತ್ವ ಶಾಸ್ತ್ರ ನನ್ನ ಸಿದ್ಧಾಂತ
ನೈಲ್, ಆಫ್ರಿಕಾ, ದ್ರಾವಿಡಗಳಲ್ಲಿ ನನ್ನ ಕುಲಮೂಲ
ಪ್ಯಾಲೆಸ್ಪೈನಿನ ವಿಧವೆ, ರುಮೇನಿಯಾದ ಚೆಲುವೆ
ಗ್ರೀಕಿನ ಕೂಲಿ, ಫ್ರಾನ್ಸಿನ ಝಾಡಮಾಲಿ
ಚೀನಾದ ರೈತ, ಕ್ಯೂಬಾದ ಯೋಧ, ಅಫಘಾನ ಅನಾಥ
ಎಲ್ಲ, ನನ್ನ ಸಂಬಂಧಿಗಳು
ನಾನು ಈ ನೆಲದ ಸೃಷ್ಟಿ
ಅಖಂಡ ಭೂಮಂಡಲವೇ ನನ್ನ ಮನೆ
ಇಂದ್ರಪ್ರಸ್ಥ ಅಯೋಧ್ಯೆ ದಿಲ್ಲಿಗಳ
ಹತ್ಯಾರಕ್ಕೆ ಸಿಕ್ಕು ಹರಿದ ನೆತ್ತರ ವಂಶಸ್ಥ ನಾನು
ನನ್ನವರ ಕರುಳು ಬಗೆದ ರಾಜ ಖಡ್ಗಗಳ ಮೇಲೆಲ್ಲ
ಪ್ರತ್ಯಕ್ಷ ದೇವತಾ ಮುದ್ರೆಗಳು
ಹಿರೋಶಿಮಾ, ನಾಗಸಾಕಿ ಬಾಂಬುಗಳ ಮೇಲೆ ಶಾಂತಿ ಮಂತ್ರಗಳು
ಇರಾಕ್, ವಿಯೆಟ್ನಾಂ ಯುದ್ಧ ವಿಮಾನಗಳ ಮೇಲೆ
ಪ್ರಜಾಪ್ರಭುತ್ವದ ಘೋಷಗಳು
ಹಿಟ್ಲರನ ಸಾವಿನ ಶಿಬಿರಗಳಲ್ಲಿ
ದೇಶಭಕ್ತಿಯ ಸಾರಗಳು
ಪಿತೃ ಭೂ ಪುಣ್ಯಭೂಮಿಯ ಹೆಂಡದಂಗಡಿಗಳಿಗೆ
ಧರ್ಮದ ಬೋರ್ಡುಗಳು
ಕೊಲೆಗಡುಕರ ಹಣೆ ಮೇಲೆಸಂಸ್ಕೃತಿಯ ಸಂಕೇತಗಳು
ಅತ್ಯಾಚಾರಿಗಳ ಬಾಯಲ್ಲೇಕೆ ಮಾತೃವಂದನೆ ಗೀತೆ
ಎಂದು ಯಾರಿಗೆ ಕೇಳಬೇಕು ನಾನು

ಲೂಟಿಕೋರರ ಕೈಯಲ್ಲಿ
ದೇಶದ ನಕಾಶೆ ನೇತಾಡುತ್ತಿದೆ
ದಲ್ಲಾಳಿಯಂಗಡಿಯಾದ ಸಂಸತ್ತಿನಲ್ಲಿ
ಸ್ವಾತಂತ್ರ್ಯದ ಹರಾಜಿಗೆ ಟೆಂಡರ್ ಕರೆಯಲಾಗಿದೆ
ನಾನು ಈ ಲೋಕದ ಪ್ರಜೆ
ತುಳಿವ ಕಾಲುಗಳೆಲ್ಲ ನನ್ನ ಕೊರಳ ಮೇಲೆ ಇವೆ

ಇಲ್ಲ. ನನಗೆ ನಿಷ್ಠೆಯಿಲ್ಲ ಈ ಗಡಿಗಳ ಮೇಲೆ
ಖಂಡಿತ ನಾನು ಬದ್ಧನಲ್ಲ ಹುಸಿ ರಾಷ್ಟ್ರೀಯತೆಗೆ
ಪ್ರಜೆಗಳನ್ನು ಸತ್ರೋಳಿಗಳನ್ನಾಗಿಸಿದ ಪ್ರಭುತ್ವಕ್ಕೆ

- ಪೀರ್ ಬಾಷ

Saturday, November 22, 2008

ಮೌನ

ಕಂಡ ಕನಸುಗಳೆಲ್ಲ ನನಸಾಗುವುದೇ ಬದುಕಿನ ನಿಜಘೋರ ಸಾಕಿ
ಗೆಲ್ಲುವ ಛಲ ಹುಟ್ಟಿಸುವ ಸೋಲ ಕಾನುವಾಸೆಯಾಗುತಿದೆ ಬದುಕಬೇಕು

No comments:

Post a Comment